ಆಲೂಗಡ್ಡೆ ಮಂಡಳಿ ಸ್ಥಾಪಿಸುವಂತೆ ಸರ್ಕಾರಕ್ಕೆ ಹೆಚ್.ಯೋಗಾರಮೇಶ್ ಒತ್ತಾಯ
ಹಾಸನ: ರಾಜ್ಯದಲ್ಲೇ ಶೇ. 50 ಆಲೂಗೆಡ್ಡೆ ಬೆಳೆಯುವ ಹಾಸನ ಜಿಲ್ಲೆಯಲ್ಲಿ ಆಲೂಗೆಡ್ಡೆ ಮಂಡಳಿ ಸ್ಥಾಪಿಸಿ, ಅದಕ್ಕೆ ಈ ಬಾರಿಯ ಬಜೆಟ್ನಲ್ಲಿ 100 ಕೋಟಿ ರೂ. ಅನುದಾನ ಮೀಸಲಿಡುವಂತೆ ಪೊಟಾಟೋ ಕ್ಲಬ್ ಅಧ್ಯಕ್ಷ ಯೋಗಾರಮೇಶ್ ಒತ್ತಾಯಿಸಿದರು.
ಶನಿವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಈ ಮೂಲಕ ಜಿಲ್ಲೆಯ ಆಲೂಗೆಡ್ಡೆ ಬೆಳೆಗಾರರಿಗೆ ರಾಜ್ಯ ಸರ್ಕಾರ ನೆರವಾಗಬೇಕು ಎಂದು ಮನವಿ ಮಾಡಿದರು.
ಈಗಾಗಲೇ ಕಾಫಿ, ತಂಬಾಕು ಮತ್ತು ತೆಂಗು ಮಂಡಳಿ ತೆರೆಯಲಾಗಿದೆ. ಅದರಂತೆ ಆಲೂಗೆಡ್ಡೆ ಅಭಿವೃದ್ಧಿಗೂ ಮಂಡಳಿ ರಚನೆ ಮಾಡಬೇಕು ಎಂದು ಯೋಗಾ ರಮೇಶ್ ಒತ್ತಾಯಿಸಿದರು. ಆಲೂಗೆಡ್ಡೆ ಮಂಡಳಿ ಸ್ಥಾಪನೆಯಿಂದ ಸ್ಥಳೀಯ ಆಲೂಗೆಡ್ಡೆಯನ್ನೇ ಬಿತ್ತನೆ ಬೀಜ ಎಂದು ಮಾರಾಟ ಮಾಡುವ ಅಕ್ರಮಕ್ಕೆ ಬ್ರೇಕ್ ಬೀಳಲಿದೆ ಎಂದರು.
ಹಾಸನ ಜಿಲ್ಲೆ ಸೇರಿದಂತೆ ಆಲೂಗೆಡ್ಡೆ ಬೆಳೆಯುವ ಕೋಲಾರ, ಚಿಕ್ಕಬಳ್ಳಾಪುರ, ಬೆಂಗಳೂರು ಗ್ರಾಮಾಂತರ, ಚಿಕ್ಕಮಗಳೂರು, ಬೆಳಗಾವಿ, ಧಾರವಾಡ ಮೊದಲಾದ ಜಿಲ್ಲೆಗಳಲಿ ಆಲೂಗೆಡ್ಡೆ ಬೆಳೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಲೂಗೆಡ್ಡೆ ಬೆಳೆಗಾರರಿಗೆ ಸಬ್ಸಿಡಿ ದರದಲಿ ದೃಢೀಕೃತ ಬಿತ್ತನೆ ಬೀಜ ನೀಡುವ ಕೆಲಸ ಆಗಬೇಕು ಎಂದು ಆಗ್ರಹಿಸಿದರು.
ಇದೇ ಜಿಲ್ಲೆಯ ಹಲವು ಕಡೆಗಳಲ್ಲಿ ಮಿತಿ ಮೀರಿರುವ ಕಾಡಾನೆ ಸಮಸ್ಯೆಗೆ ಕಡಿವಾಣ ಹಾಕುವ ಕೆಲಸ ತುರ್ತಾಗಿ ಆಗಬೇಕಿದೆ. ವಿಷಯದಲ್ಲಿ ಪಕ್ಷ ರಾಜಕೀಯ ಬೇಡ. ಕಳೆದ ಹಲವು ದಶಕಗಳಿಂದ ಮಲೆನಾಡು ಭಾಗದ ಜನರನ್ನು ಕಾಡುತ್ತಿರುವ ಜನರನ್ನು ಬಾಧಿಸುತ್ತಿರುವ, ಬೆಳೆನಷ್ಟ ಮತ್ತು ಅಮಾಯಕರ ಜೀವಹಾನಿಗೆ ಕಾರಣವಾಗಿರುವ ಕಾಡಾನೆ ಸಮಸ್ಯೆ ಕಡಿವಾಣ ಹಾಕುವ ಸಂಬಂಧ ಆನೆ ಕಾರಿಡಾರ್ ನಿರ್ಮಾಣ ಸೇರಿದಂತೆ ಇಡಿಯಾಗಿ ಸಮಸ್ಯೆ ನಿವಾರಣೆಗೆ ಈ ಬಾರಿಗ ಬಜೆಟ್ನಲ್ಲಿ ನಿಗದಿತ ಹಣ ಮೀಸಲಿಡಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ ಆನೆಕಾರಿಡಾರ್ ಯೋಜನೆ ಅನುಷ್ಠಾನ ಅತ್ಯವಶ್ಯವಾಗಿ ಕರ್ಯರೂಪಕ್ಕೆ ಬರಬೇಕಿದೆ. ಇದಕ್ಕೂ ಕೂಡ ಹಣ ಮೀಸಲಿಡುವಂತೆ ಆಗ್ರಹಿಸಿದರು.
ಹಾಗೆಯೇ ಜಿಲ್ಲೆಯ ರೇಷ್ಮೆ ಬೆಳೆಗಾರರೂ ಸಾಕಷ್ಟು ಸಂಕಷ್ಟದಲ್ಲಿದ್ದು, ಅವರಿಗೂ ಶೇ. 100 ರಷ್ಟು ಸಹಾಯಧನ ಹೆಚ್ಚಿಸಿ ಅದನ್ನು ಮುಂದುವರಿಸಬೇಕು. ಜೊತೆಗೆ ಜಿಲ್ಲೆಯ ಸಕಲೇಶಪುರ, ಆಲೂರು, ಬೇಲೂರು, ಅರಕಲಗೂಡು ಮೊದಲಾದ ಕಡೆಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಫಿ ಬೆಳೆಯಲಾಗುತ್ತಿದೆ.ಆದರೆ ಹಲವು ಕಾರಣಗಳಿಂದ ಕಾಫಿ ಬೆಳೆಗಾರರಿಗೆ ಸಿಗಬೇಕಾದ ಸೌಲಭ್ಯ ಸಿಗುತ್ತಿಲ್ಲ. ಹೀಗಾಗಿ ಕಾಫಿ ಬೆಳೆಗಾರರಿಗೂ ಪ್ರೋತ್ಸಾಹಧನ ನೀಡಬೇಕು ಎಂದು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದರು.
ಪತ್ರಿಕಾಗೋಷ್ಟಿಯಲ್ಲಿ ಜಯರಾಂ, ಲೋಕೇಶ್, ರಾಜಣ್ಣ, ಗೋಪಾಲೇಗೌಡ, ಚಂದ್ರೇಗೌಡ ಇದ್ದರು.
ಕಾಮೆಂಟ್‌ಗಳು
ಕಾಮೆಂಟ್ ಪೋಸ್ಟ್ ಮಾಡಿ